ಆಕೆಯೀಗ ಅರ್ಧ ಕಣ್ಣನ್ನಷ್ಟೇ ತೆರೆದಿದ್ದಾಳೆ
ಅದಕ್ಕೆಂದೇ
ಹಕ್ಕಿಯೊಂದು ಹೊರಕ್ಕೆ ಕತ್ತು ಚಾಚಿ
ಅತ್ತ ಇತ್ತ ನೋಡಿ
ಮತ್ತೆ ಕಣ್ಮುಚ್ಚುತ್ತದೆ
ಯಾವಾಗ ಮಗ್ಗಲು ಬದಲಾಯಿಸಿತೋ ಗೊತ್ತಿಲ್ಲ
ನಿಷಾಮಾತೆಯ ಮಡಿಲಿಂದ
ಉಷೆಯ ಮಡಿಲಿಗೆ
ಆಕೆ ಪೂರ್ತಿ ಕಣ್ಣು ತೆರೆದರೆ
ಗೂಡು ಬಿಡಲು ಸಮಯವಾಯಿತೆಂದೇ
ಹಾರಬೇಕು ಕುಟುಕು, ಕಾಳಿಗಾಗಿ
ನಿದ್ದೆಯೆಂದರೆ ಮತ್ತೆ ಮಗುವಾದಂತೆ
ಅರ್ಧಕಣ್ಣು ತೆರೆದಾಗ
ಜಗತ್ತು ಕರಗುತ್ತದೆ ಸಕ್ಕರೆಯಂತೆ
ನೋವು-ನಲಿವುಗಳೆಲ್ಲ
ಒಂದೇ ಗಿಡದ ಹೂವು-ಮುಳ್ಳುಗಳಾಗುತ್ತವೆ
ಮತ್ತೆ ಇಬ್ಬನಿ ತನ್ನಷ್ಟಕ್ಕೆ ಹರಡುತ್ತದೆ
ಕಿರಣಗಳೆದುರಿಗೆ ಕರಗುತ್ತದೆ
ಆಕೆ ಅರ್ಧ ಕಣ್ಣನ್ನಷ್ಟೇ ತೆರೆದಿದ್ದಾಳೆ
ಆಕೆ ಅರ್ಧ ಕಣ್ಣನ್ನಷ್ಟೇ ತೆರೆದಿದ್ದಾಳೆ
ಹಕ್ಕಿ ಕಣ್ಮುಚ್ಚಿ ಕುಳಿತಿದೆ
ಎಚ್ಚರದಲ್ಲಿಯೇ
ಸಂತಸದ ಅಲೆ ಸಾಗರದ ತುಂಬ
ಏರುತ್ತಿದೆ, ಇಳಿಯುತ್ತಿದೆ