ನಾನು ಬರೆಯದಿದ್ದರೆ ಈ ಸಾಲುಗಳು,
ಹೋಗಬಹುದು, ಮತ್ತಾರದೋ ಬತ್ತಳಿಕೆಗೆ.
ಆದರೂ ಬರೆಯುತ್ತೇನೆ, ಬರೆಯದಿದ್ದರೆ
ಆಗುವುದೇ ಇಲ್ಲ ಅನ್ನಿಸಿದಾಗ ಮಾತ್ರ.
ಬತ್ತಳಿಕೆ ಸೇರುತ್ತವೆ, ಬಳಸಲ್ಪಡುತ್ತವೆ;
ಅಥವಾ ಸಾಲುಗಳ ಕೈಯಲ್ಲಿ ನಾನು?
ಯಾವ ದ್ವೇಷಕ್ಕೋ, ಯಾರ ಪ್ರೇಮಕ್ಕೋ
ಯಾವ ಹುನ್ನಾರವಿದೆಯೋ ಈ ಶಬ್ದ-ಸಾಲುಗಳಲಿ?
ಕಾಡು ತುಂಬಿ ಅರಳುತ್ತವೆ ಹೂಗಳು
ಸುರಿಯುತ್ತದೆ ಬೆಳದಿಂಗಳು,
ಬಿರಿಯುತ್ತದೆ ನೆಲ, ಚಿಗುರೇಳುತ್ತದೆ,
ಬೊಬ್ಬಿರಿಯುತ್ತದೆ ಮಳೆ.
ಕಾರ್ಯಕಾರಣಗಳ ಚಿಂತೆಯಿಲ್ಲವೇನು?
ಮೆಲ್ಲನುದುರಿ ಹರಿವ ನೀರಿನಲ್ಲಿ
ಮುಂದೆ ತೇಲುತ್ತದೆ ಎಲೆ..!
ಎಷ್ಟು ಉತ್ತರಿಸಿದರೂ ಮುಗಿಯುವುದಿಲ್ಲ,
ನಿಲ್ಲುವುದಿಲ್ಲ ಈ ಪ್ರಶ್ನೆಗಳ ಪ್ರವಾಹ,
ಪ್ರತೀ ಉತ್ತರಕ್ಕೂ ಉಕ್ಕೇರುತ್ತದೆ ನೆರೆ.
ಪ್ರಶ್ನೆಗಳ ಕರಗಿಸದ ಉತ್ತರ ಉತ್ತರವಲ್ಲ.
ಉತ್ತರ ತಾನೂ ಕರಗದಿದ್ದರೆ ಇಳಿಯುವುದಿಲ್ಲ ಪ್ರವಾಹ;
ನದಿ ಶಾಂತವಾಗುವುದಿಲ್ಲ.
ಬರೆಯದಿದ್ದರೆ ಆಗುವುದಿಲ್ಲ ಎನ್ನಿಸಿದಾಗ ಮಾತ್ರ
ಮಳೆ ಸುರಿಯುತ್ತದೆ ಇಳೆಗೆ.
ಗಾಳಿ ಮೋಡವನ್ನು ಬಳಸುವುದಿಲ್ಲ; ಇಳೆ ಮಳೆಯನ್ನು.
ಬತ್ತಳಿಕೆಗೆ ಬಂದ ಬಾಣಕ್ಕೆ
ಗುರಿಯಿಲ್ಲದಾಗ ಮಾತ್ರ ಗುರಿ ತಲುಪುತ್ತದೆ;
ಗುರಿಯಿಲ್ಲದಾಗ ಮಾತ್ರ ಈ ಸಾಲುಗಳು ತಲುಪುತ್ತವೆ.