ವರ್ಡ್ಸ್‌ವರ್ಥ್ ಕಾವ್ಯ

ನಾನೇಕೆ ಮತ್ತೆ ಮತ್ತೆ ರೊಮ್ಯಾಂಟಿಕ್ ಅಥವಾ ರಮ್ಯ ಕಾವ್ಯಕ್ಕೆ ಮರಳುತ್ತೇನೆಂದರೆ, ಆ ಕಾವ್ಯದಲ್ಲಿ ಔಷಧೀಯ ಗುಣವಿದೆ ಮತ್ತು ಅದು ನನ್ನನ್ನು ಮತ್ತೆ ಪ್ರಕೃತಿಯೆಡೆಗೆ ಕರೆದೊಯ್ಯುತ್ತದೆ, ಪ್ರಾಕೃತಿಕ ಹಂಬಲವಾದ ಪ್ರೇಮವನ್ನೂ ಸೇರಿ. ನನಗಂತೂ ಓದು ಕಾವ್ಯದ ಓದು ಪ್ರಾರಂಭವಾದದ್ದೇ ರಮ್ಯ ಕಾವ್ಯದ ಓದಿನಿಂದ ಮತ್ತು ಕಾವ್ಯ ರುಚಿಸಿದ್ದು ಸಹಾ ರಮ್ಯ ಕಾವ್ಯದಿಂದಾಗಿಯೇ. ಅಂತಹ ರಮ್ಯಕಾವ್ಯದ ಅತ್ಯಂತ ಪ್ರಸಿದ್ಧ ಕವಿಯಾದ ವಿಲಿಯಮ್ ವರ್ಡ್ಸ್‌ವರ್ಥ್‌ನ ಕಾವ್ಯದ ಕುರಿತು ಬರೆಯುವುದರೊಂದಿಗೆ ನನ್ನ ಕಾವ್ಯದ ಕುರಿತ ಬರವಣಿಗೆಯನ್ನು ಆರಂಭಿಸಲು ಬಯಸುತ್ತೇನೆ. ಇದರಲ್ಲಿ ಒಂದು ಸ್ವಾರ್ಥವೂ ಇದೆ; ವರ್ಡ್ಸ್‌ವರ್ಥ್‌ನನ್ನು ಮತ್ತೆ ಓದುವ ಮತ್ತು ಅವನ ಓದದೇ ಇರುವ ಅನೇಕ ಕವಿತೆಗಳನ್ನು ನನಗೆ ಓದುವ ಅವಕಾಶವೂ ಇದಾಗಿದೆ.

{“ಪ್ರಕೃತಿ ಪ್ರೇಮ” ಹದಿವಯಸ್ಸಿನಲ್ಲಿ ಕಂಬನಿಗಳನ್ನು ತರಿಸುವಷ್ಟು ಆಳವಾಗಿ ನನ್ನಲ್ಲಿತ್ತು. ನಾನು ಅದನ್ನು ಅನೇಕ ಬಾರಿ, ಅನೇಕ ಕಡೆಗಳಲ್ಲಿ ಹೇಳಿಕೊಳ್ಳುತ್ತಿದ್ದೆ ಕೂಡಾ. ಕವಿತೆಗಳಲ್ಲಿ ಬರೆದುಕೊಳ್ಳುತ್ತಿದ್ದೆ; ಪ್ರಕೃತಿಯೆಂದರೆ ನನಗೆ ಏನು, ಮತ್ತು ಪ್ರಕೃತಿ ಎಂದರೆ ನನಗೆ ಎಷ್ಟೆಲ್ಲ ಪ್ರೇಮ ಎಂದೆಲ್ಲ. ಆದರೆ ಇಪ್ಪತ್ತು ದಾಟುವ ಹೊತ್ತಿಗೆ, ಈಗ ನನಗೆ ಅಚ್ಚರಿಯಾಗುತ್ತದೆ, ಪ್ರಕೃತಿ ಪ್ರೇಮ ಎಂಬುದನ್ನು ನಾನು ಸಿನಿಕತೆಯಿಂದ ನೋಡಲು ತೊಡಗಿದ್ದೆ. ಯಾರಾದರೂ ನೀವು ಪ್ರಕೃತಿ ಪ್ರೇಮಿಯೇ ಎಂದು ಕೇಳಿದಾಗ ಅವರನ್ನು ಹಾಸ್ಯ ದೃಷ್ಟಿಯಿಂದ ನೋಡುತ್ತಿದ್ದೆ. ಅದಕ್ಕೆ ಒಂದಿಷ್ಟು ಸಪ್ರಮಾಣವಾದ ಕಾರಣವೂ ಇತ್ತು. ಅದೇನು ಅಂದರೆ, ನಾವು ಯಾವುದನ್ನು ಸಾಮಾನ್ಯವಾಗಿ ಪ್ರಕೃತಿ ಅನ್ನುತ್ತೇವೆ? ಹಸಿರನ್ನು ಮತ್ತು ಕಾಡನ್ನು. ಹಾಗಾದರೆ ನಾನು ಪ್ರಕೃತಿಯಲ್ಲವೇ? ನನ್ನ ಸುತ್ತ ಇರುವ ನೀವು, ಮತ್ತು ಹಸಿರಿನಿಂದ ಹೊರಬಂದ ನಾವು ಕಟ್ಟಿಕೊಂಡ ಈ ಬದುಕು ಪ್ರಕೃತಿಯಲ್ಲವೇ? ಕೇವಲ ಹಸಿರು ತುಂಬಿದ ಕಾಡನ್ನಷ್ಟೇ ಪ್ರೀತಿಸುವುದು ಪ್ರಕೃತಿ ಪ್ರೇಮ ಹೇಗಾಗುತ್ತದೆ? ನಮ್ಮ ಹೆಚ್ಚಿನ ಬದುಕನ್ನು ನಾವು ಕಳೆಯುವುದೆಲ್ಲ ಈ ನಾವು ಕಟ್ಟಿಕೊಂಡ ಊರುಗಳಲ್ಲಿ, ಮತ್ತು ಮಾನವರ ನಡುವೆಯೇ ಅಲ್ಲವೆ? ಇದೊಂದು ಪ್ರಶ್ನೆಯ ಹೊರತಾಗಿ ನೋಡಿದರೆ ನನಗೆ ಇಪ್ಪತ್ತರ ಹೊಸತರಲ್ಲಿ ಹದಿನೈದು ಹದಿನಾರರಲ್ಲಿದ್ದ ಗಾಢ ಪ್ರಕೃತಿ ಪ್ರೇಮ ಕಳೆದೇ ಹೋಗಿತ್ತು. ಏನಿದೆ ಕಾಡುಗಿಡಗಳಲ್ಲಿ, ಹೂಗಳಲ್ಲಿ, ಹರಿವ ನೀರಿನಲ್ಲಿ ಪ್ರೀತಿಸುವಂತಹದ್ದು? ಆದರೆ ಆ ಸಿನಿಕ ಭಾವ ತುಂಬ ವರುಷಗಳೇನೂ ಉಳಿಯಲಿಲ್ಲ ಎನ್ನುವುದೇ ನನ್ನ ದೈವ. ಒಂದೆರೆಡು ವರ್ಷಗಳಲ್ಲಿ ಆ ಸಿನಿಕ ಭಾವವೆಲ್ಲ ಕಳೆದುಹೋಯಿತು.

ಆದರೆ ಹದಿನಾರರಲ್ಲಿದ್ದ ಆ ಗಾಢ ಪ್ರೇಮ ಮತ್ತು ಮೈಮರೆವು ಈಗ ನನ್ನಲ್ಲಿಲ್ಲ. ಈಗ ನಾನು ಪ್ರಕೃತಿಯ ಸಾಮಿಪ್ಯದಲ್ಲಿ ಬೇರೆ ಯಾವುದರೆಡೆಗೋ ಅತ್ಯಂತ ಆಳವಾದ ಅಭೀಪ್ಸೆಯಿಂದ ತುಂಬಿ ಹೋಗುತ್ತೇನೆ. ನೀಲಗಿರಿ ಮರವೊಂದರಿಂದ ಮಳೆನಿಂತ ಮೇಲೆ ಇಳಿಯುವ ನೀರ ನೋಡುತ್ತ ಕಣ್ಣೀರು ಸುರಿಯುತ್ತಿದ್ದರೆ, ಮರವನ್ನು ನೋಡುತ್ತಿದ್ದಂತೆಯೇ ನನ್ನ ಕಂಬನಿಗಳನ್ನೇ, ನನ್ನ ಎದೆಯ ಭಾವವನ್ನೇ ನೋಡಿಕೊಳ್ಳುತ್ತೇನೆ. ಯಾವುದೋ ಎಳೆಯ ಗಿಡದ ಕೊಂಬೆಯನ್ನು ಮೃದುವಾಗಿ ಅಪ್ಪಿಕೊಂಡು, ನನ್ನ ಹೃದಯದಲ್ಲಿ ಮತ್ತೇನನ್ನೋ ಹುಡುಕುತ್ತೇನೆ. ಒಂದಿಷ್ಟು ವರ್ಷಗಳವರೆಗೆ ಪ್ರೇಮ ಭಾವವಿರದೇ ಬರಿದಾಗಿ ಹೋಗಿತ್ತಲ್ಲ ಈ ಹೃದಯಗಡಿಗೆ, ಅದು ಈಗ ಹೇಗೆ ತುಂಬುತ್ತಿದೆಯಲ್ಲ ಎಂದು ನೋಡಿಕೊಳ್ಳುತ್ತೇನೆ. ಹಸಿರಿನ ಸಾಮಿಪ್ಯದಲ್ಲಿ ನನ್ನೊಳಗೆ ಪ್ರೇಮದ ಪುನರಾವಿರ್ಭಾವದೆಡೆಗೆ ಧನ್ಯತಾಭಾವ ನಾನೇ ಹುಟ್ಟುತ್ತದೆ, ನನ್ನ ನಡಿಗೆಯಲ್ಲಿ ನೈಧಾನ್ಯ ನನ್ನ ನೋಟದಲ್ಲಿ ಮೃದುತ್ವ ಉಂಟಾಗತೊಡಗುತ್ತದೆ ಮತ್ತು ಈ ನಂತರದಲ್ಲಿ ನನ್ನ ಜನ ಹೆಚ್ಚು ಪ್ರಿಯಕರರಾಗುತ್ತಾರೆ. ನಾನು ಮತ್ತೆ ಪ್ರಕೃತಿಯೆಡೆಗೆ ಹೊರಳಿದಂತೆ ವರ್ಡ್ಸ್‌ವರ್ಥ್‌ನೆಡೆಗೆ ಹೊರಳುತ್ತೇನೆ…}

ಅನೇಕ ವಿಷಯಗಳಲ್ಲಿ ವರ್ಡ್ಸ್‌ವರ್ಥ್‌ನನ್ನು ನಮ್ಮ ಕವಿ ಕುವೆಂಪುರವರಿಗೆ ಹೋಲಿಸಬಹುದು. ಕುವೆಂಪು ಸಹಾ ವರ್ಡ್ಸ್‌ವರ್ಥ್‌ನಂತೆ ಪ್ರಕೃತಿ ಕವಿ. (ನನಗೂ ಅಚ್ಚರಿಯಾಗುತ್ತಿದೆ, ನಾನ್ಯಾಕೆ ವರ್ಡ್ಸ್‌ವರ್ಥ್‌ಗೆ ಏಕವಚನವನ್ನೂ, ಕುವೆಂಪುಗೆ ಬಹುವಚನವನ್ನೂ ಬಳಸುತ್ತಿದ್ದೇನೆ ಎಂದು. ಇಬ್ಬರೂ ನನ್ನ ಪಾಲಿಗೆ ಸಮಾನರು.) ವರ್ಡ್ಸ್‌ವರ್ಥ್ ರಾಜಕವಿಯಾದವನು ಮತ್ತು ಕುವೆಂಪು ಸಹಾ ನಮ್ಮ ನಾಡಿಗೆ ರಾಜಕವಿಯೇ ಆದವರು. ಕುಪ್ಪಳ್ಳಿಯೆಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಮೈಸೂರಿನಲ್ಲಿಯೇ ತಮ್ಮ ಮುಂದಿನ ಬದುಕನ್ನು ಕಳೆದವರು. ಅಂತೆಯೇ ವರ್ಡ್ಸ್‌ವರ್ಥ್‌ ಸಹಾ ತನ್ನ ಜೀವಿತಾವಧಿಯನ್ನು ಲಂಡನ್‌ನಲ್ಲಿಯೇ ಕಳೆಯುತ್ತಾನೆ. ಆದರೆ ಇಬ್ಬರೂ ಹಳ್ಳಿಯ ಪರಿಸರದ ಮತ್ತು ಪ್ರಕೃತಿಯ ಕುರಿತೇ ಹೆಚ್ಚು ಬರೆದರು. ವರ್ಡ್ಸ್‌ವರ್ಥ್‌ ಸುಲಭವಾಗಿ ಅರ್ಥವಾಗಲಿ ಎಂದು ಈ ಹೋಲಿಕೆ ಅಷ್ಟೇ!

ವರ್ಡ್ಸ್‌ವರ್ಥ್‌ ಸಾವಿರಾರು ಕವಿತೆಗಳನ್ನು ಬರೆದಿದ್ದಾನೆ. ಅವುಗಳಲ್ಲಿ ನಮಗೆ ತೀರಾ ಪರಿಚಿತವಾದ ಕೆಲವು ಕವಿತೆಗಳನ್ನು ಬಿಟ್ಟು ಕೆಲವು ಹೊಸ ಕವಿತೆಗಳೊಡನೆ ವರ್ಡ್ಸ್‌ವರ್ಥ್ ಕುರಿತು ಬರೆಯುತ್ತೇನೆ.
ವರ್ಡ್ಸ್‌ವರ್ಥ್ ಕಂಬರ್‌ಲ್ಯಾಂಡ್‌ನ ಕಾಕರ್‌ಮೌತ್ ಎಂಬಲ್ಲಿ (ನಾರ್ಥ್‌ವೆಸ್ಟ್ ಇಂಗ್ಲೆಂಡಿನ ಲೇಕ್ ಡಿಸ್ಟ್ರಿಕ್ಟ್ ) ೭ ಎಪ್ರಿಲ್ ೧೭೭೦ ರಂದು ಜನಿಸುತ್ತಾನೆ. ಆತನ ತಂದೆ ಜಾನ್ ವರ್ಡ್ಸ್‌ವರ್ಥ್ ಮತ್ತು ತಾಯಿ ಆನ್ ಕುಕ್‌ಸನ್. ಕವಯತ್ರಿ ಮತ್ತು ದಿನಚರಿ ಬರಹಗಾತಿಯಾದ ಅವನ ತಂಗಿ ಡೊರೊಥಿ ವರ್ಡ್ಸ್‌ವರ್ಥ್ ನಂತರದ ವರ್ಷದಲ್ಲಿ ಜನಿಸುತ್ತಾಳೆ. ವರ್ಡ್ಸ್‌ವರ್ಥ್‌ನಿಗೆ ಇನ್ನೂ ಮೂರು ಜನ ಸಹೋದರರಿದ್ದರೂ ಅವನಿಗೆ ಜೀವನ ಪೂರ್ತಿ ಆತ್ಮೀಯಳಾಗಿ ಉಳಿಯುವವಳು ಡೊರೊಥಿ ಮಾತ್ರ.

ಲೀಗಲ್ ರೆಪ್ರೆಸೆಂಟೇಟೀವ್ ಆಗಿದ್ದ ತಂದೆ ತನಗೆ ಸಿಗುತ್ತಿದ್ದ ಅತ್ಯಲ್ಪ ಸಮಯದಲ್ಲಿಯೇ ಮಗನಿಗೆ ಮಿಲ್ಟನ್, ಶೇಕ್ಸ್‌ಪಿಯರ್ ಮತ್ತು ಸ್ಪೆನ್ಸರ್‌ರಂತಹ ಕವಿಗಳ ಪರಿಚಯ ಮಾಡಿಕೊಡುತ್ತಾನೆ. ಆದರೆ ೧೭೭೮ ರಲ್ಲಿ ತನ್ನ ತಾಯಿಯ ಸಾವಿನ ನಂತರ ವರ್ಡ್ಸ್‌ವರ್ಥ್‌ನನ್ನು ಅವನ ತಂದೆ ಹಾಕ್‌ಶೆಡ್ ಗ್ರಾಮರ್ ಸ್ಕೂಲ್‌ಗೆ ಸೇರಿಸುತ್ತಾನೆ ಮತ್ತು ಡೊರೊಥಿಯನ್ನು ಯಾರ್ಕ್‌ಶೇರ್ ನಲ್ಲಿ ನೆಂಟರ ಮನೆಗೆ ಕಳಿಸುತ್ತಾನೆ. ಆನಂತರ ಸುಮಾರು ಒಂಬತ್ತು ವರ್ಷಗಳ ವರೆಗೆ ಅಣ್ಣ ತಂಗಿ ಭೇಟಿಯಾಗುವುದೇ ಇಲ್ಲ.
ವರ್ಡ್ಸ್‌ವರ್ಥ್‌ನ ಮೊದಲ ಕವಿತೆಯೆಂದರೆ ೧೭೮೭ರಲ್ಲಿ “ದಿ ಯುರೋಪಿಯನ್ ಮ್ಯಾಗಜೀನ್” ನಲ್ಲಿ ಪ್ರಕಟಗೊಂಡ ಅವನ ಒಂದು ಸಾನೆಟ್. ಆ ವರ್ಷವೇ ಆತ ಕೇಂಬ್ರಿಡ್ಜ್ ನ ಸೆಂಟ್ ಜಾನ್ಸ್ ಕಾಲೇಜಿನಲ್ಲಿ ಸೇರಿ ೧೭೯೧ರಲ್ಲಿ ಬಿಎ ಪದವಿ ಪಡೆಯುತ್ತಾನೆ. ೧೭೯೦ರಲ್ಲಿ ಆತ ಒಂದು ಯುರೋಪಿನ ತುಂಬ ನಡಿಗೆಯಲ್ಲಿಯೇ ಪ್ರವಾಸವನ್ನು ಕೈಗೊಳ್ಳುತ್ತಾನೆ. ಆ ಸಮಯದಲ್ಲಿ ಆಲ್ಪ್ಸ್ ಪರ್ವತವನ್ನು, ಫ್ರ್ಯಾನ್ಸ್, ಸ್ವಿಡ್ಝರ್‌ಲ್ಯಾಂಡ್ ಮತ್ತು ಇಟಲಿಯ ಪ್ರವಾಸ ಮಾಡುತ್ತಾನೆ.

(ಮುಂದುವರೆಸುತ್ತೇನೆ..)

1 comment

  1. >ಬ್ಲಾಗ್ ಅನ್ನು ಉತ್ತಮವಾಗಿ ಉಪಯೋಗಿಸುವ ನಿಮ್ಮ ಮಹತ್ವಾಕಾಂಕ್ಷೆ ಯಶಸ್ವಿಯಾಗಲಿ. ಹೊಸ ಆಲೋಚನೆ.ಅಭಿನಂದನೆಗಳು.ಒಲವಿನಿಂದಬಾನಾಡಿ

Leave a Reply

Your email address will not be published. Required fields are marked *