ಕಾಡಿನಲ್ಲಿ ನಡೆದುಹೋದ..

ಈ ನದಿ ದಡದಲ್ಲಿ ಇನ್ನೂ ಬಿಸಿಯಿದೆ ಮರಳು
ಆಶ್ರಮದಲ್ಲಿ ಉರಿಯ ಬೆಳಕು, ಸುತ್ತ ಹರಡುತ್ತಿದೆ ಕತ್ತಲು.
ಗುರುದೇವ ವಿಶ್ರಾಂತಿಯಲ್ಲಿ, ಪೂರ್ವದಲ್ಲಿ ಏರುತ್ತಿದ್ದಾನೆ ಚಂದಿರ.
ಹೊಳೆಯುತ್ತಿವೆ ತಾರೆಗಳು, ವಿಹರಿಸುತ್ತಿದ್ದಾಳೆ ನದಿತಾಯಿ.
ಬೆಚ್ಚಗೆ ಬೀಸುವ ಗಾಳಿಯಲ್ಲಿ ನಾವಿಬ್ಬರು ಕುಳಿತಿದ್ದೇವೆ…

ಹೊತ್ತು ಮುಳುಗುವ ಮೊದಲಷ್ಟೇ ಹೇಳಿದ್ದರು ಗುರುದೇವ,
“ಕಾಡಿನಲ್ಲಿ ನಡೆದುಹೋದ ಶ್ವೇತಕೇತು ಕಳೆದುಹೋದ.”

ಅವಳ ಮನಸಲೂ ಈಗ ಅದೇ ಕತೆಯಿರಬೇಕು,
ತಾರೆಗಳನ್ನು ನೋಡುವ ಅವಳ ಮೊಗದಲ್ಲಿ ಮುಗುಳ್ನಗೆ.
ನನಗಿಂತ ಚಿಕ್ಕವಳಿರಬೇಕು, ಆದರೂ ಅದು ಲೆಕ್ಕಾಚಾರವಲ್ಲ,
ಗುರುವಿಗೆ ನಾವು ಶಿಷ್ಯಂದಿರು ಅಷ್ಟೆ!

ಆಗಸದಲ್ಲಿ ಎರೆಡು ನಕ್ಷತ್ರಗಳು ಪ್ರಭೆತುಂಬಿ ಹೊಳೆಯುತ್ತಿವೆ.
ಅತ್ತಲೇ ನೋಡುತ್ತಿರುವ ಅವಳಿಗೆ ಹೇಳುತ್ತೇನೆ:
“ಗೋದಾವರೀ, ಆ ತಾರೆಗಳೆರೆಡು ನನ್ನ ನಿನ್ನ ಅಜ್ಜಂದಿರು.
ನಿನ್ನ ಅಜ್ಜನ ಮನೆಯಲ್ಲಿ ನನ್ನ ಅಜ್ಜ ಕೂಲಿಯಾಳಾಗಿದ್ದನಲ್ಲ.
ನಿನ್ನ ಅಜ್ಜ ನನ್ನ ಅಜ್ಜನಿಗೆ ವೀಳ್ಯವನ್ನು ಮೇಲಿನಿಂದ ಬೀಳಿಸುತ್ತಿದ್ದ,
ನನ್ನ ಅಜ್ಜ ಮೈಮುದುರಿ ನಿಂತು ಹಿಡಿಯುತ್ತಿದ್ದ.
ನೆನಪಿದೆಯೇ, ಈಗ ನೋಡು ಕಳ್ಳರು,
ಹೇಗೆ ಜೊತೆಜೊತೆಯಾಗಿ ಹೊಳೆಯುತ್ತಿದ್ದಾರೆ.
ಹಳೆಯದನ್ನು ಮೆಲುಕು ಹಾಕುತ್ತಿದ್ದಾರೆ.
ವೀಳ್ಯದ ಕೆಂಪುಕಿಡಿ ಹೇಗೆ ಹರಡುತ್ತಿದೆ ನೋಡು
ಇಬ್ಬರ ಬಾಯಿಂದಲೂ!
ಈ ಕತ್ತಲ ನೀರವದಲ್ಲಿ ಹೇಗೆ ಗಹಗಹಿಸುತ್ತಿದ್ದಾರೆ.
ಈಗವರಿಗೆ ಗೊತ್ತಾಗಿರಬೇಕು ತಾವಿಬ್ಬರೂ ಒಂದೆಂದು.
ಹಳೆಯ ತಪ್ಪುಗಳನ್ನೆಲ್ಲ ನೆನೆದು ನಗುತ್ತಾರೆ.”

ಆಗಸದ ಕಡೆಗೆ ನೋಡುತ್ತಿದ್ದವಳು ತಿರುಗುತ್ತಾಳೆ.
ನಾನೂ ಅವಳ ಪ್ರತಿಕ್ರಿಯೆಗಾಗಿ ತಿರುಗಿ ನೋಡುತ್ತೇನೆ.
“ಶ್ವೇತಕೇತು ಕಾಡಿನ ಬದಲು ನಾಡಿನ ಕಡೆಗೆ ಹೊರಟನೇ?
ಆತ್ಮಮುಖಿಯಾಗಬೇಕಾದವನು ಸಮಾಜಮುಖಿಯಾದನೇ?
ಎಷ್ಟು ಸುಲಭ ಅಲ್ಲ, ಮೈಮರೆಯುವುದು?”, ಮುಗುಳ್ನಗುತ್ತಾಳೆ.

ನಾಚಿಕೆಯಾಗುತ್ತದೆ ನನಗೆ.
ನಕ್ಷತ್ರಗಳಿಂದ ಮಾತಿನ ಬದಲು, ಮೌನ ಬರುವ ದಿನ
ಯಾವುದೆಂದು ಯೋಚಿಸುತ್ತೇನೆ, ಕಾಯುತ್ತೇನೆ.

1 comment

Leave a Reply

Your email address will not be published. Required fields are marked *