ಓರೆನೋಟ ಬೀರುವುದಿಲ್ಲ ಆಕೆ,
ನೆಟ್ಟನೋಟ, ದಿಟ್ಟಮಾತು
ಸಿಡಿಲುಬಂದು, ಮಳೆ ಸುರಿದು ಮತ್ತೆ ಶಾಂತ.
ತೊಯ್ದವನ ಪಾಡು ಆಕೆಗೆ ಗೊತ್ತಾಗುವುದಿಲ್ಲ.
ಬೇಸಿಗೆಯಲ್ಲಿ ಬೆಂದ ಭೂಮಿಯಿಂದ
ಮೊದಲ ಮಳೆಗೆ ಮೇಲೆದ್ದ ಗಂಧ
ದಿಕ್ಕುದಿಕ್ಕುಗಳಿಗೆ ಪಸರಿಸುವಾಗ
ಆತ್ಮದ ಒಳಹೊಕ್ಕು ಹಸಿರಿಸುವಾಗ
ಚೈತ್ರಗಂಧಿಗೀ ನಲಿವು ಗೊತ್ತಾಗುವುದಿಲ್ಲ.
ಬೆಳ್ಳಿಗೆಜ್ಜೆಗೆ ಸೋತು
ಬೆಟ್ಟಬನಗಳಲ್ಲಿ ಹುಡುಕುವಾಗ
ಅಟ್ಟದಲೋ, ಕಟ್ಟೆಯಲೋ
ಬರಿದೆ ಕುಳಿತಿರುತ್ತಾಳೆ.