ಆಗಸವನ್ನೆಲ್ಲ ಬಿಳಿಮೋಡದಿಂದ ತುಂಬಿಸುತ್ತಾಳೆ

ಆಗಸದಲ್ಲೊಂದು ಮೋಡ
ಚಿಟ್ಟೆಯ ಆಕಾರ ತಳೆದು
ತೇಲುತ್ತ, ಹರಡುತ್ತ
ಚದುರಿಹೋಗುತ್ತದೆ.

ನೋಡುತ್ತಾಳೆ ಕಣ್ಣರಳಿಸಿ,
ತೆರೆದುಕೊಳ್ಳುತ್ತದೆ ಬಾಲ್ಯ,
ಹಸಿರು ದಾರಿಯಲ್ಲಿ ನಡೆದು,
ಹೂಗಂಧ ಹರಡಿರುವ
ಬಯಲಕಂಪಿಗೆ ದೀರ್ಘ ಉಸಿರೆಳೆದುಕೊಂಡಿದ್ದು..
ಆಟವಾಡುವ ಚಿಟ್ಟೆಗಳ ಹಿಂದೆ ಓಡಿದ್ದು,
ಅರಿಶಿಣಬಣ್ಣವೆಲ್ಲ ಚಿಟ್ಟೆಯಿಂದುದುರಿ
ಕೈಗಳು ಬಣ್ಣಬಣ್ಣವಾಗಿದ್ದು.
ಚಿಟ್ಟೆಯ ಚೈತನ್ಯ ತನ್ನೊಳಗೆ ಸೇರಿ
ಆಕೆ ಚಿಟ್ಟೆಯೇ ಆಗಿ ಮನೆಗೆ ಮರಳಿದ್ದು.
ನೆನೆಯುತ್ತಾಳೆ,
ಚಿಟ್ಟೆಯೇ ಕೈಮೇಲೆ ಕುಳಿತಂತೆ ಪುಲಕಗೊಳ್ಳುತ್ತಾಳೆ.
ಕಾಡಿನ ದಾರಿಯಲ್ಲಿ ಸಾಗುತ್ತೇನೆ,
ಬೆಟ್ಟದಂಚಿನ ಮಲ್ಲಿಗೆ ಬನದಲ್ಲಿ ಚಿಟ್ಟೆಗಳ ಸಂತೆ,
ಏನೋ ಮಾತು, ಏನೋ ಸಂಭ್ರಮ.
ಕಲ್ಪಿಸಿಕೊಳ್ಳುತ್ತೇನೆ, ಆಕೆ ಇಲ್ಲಿ ನಡೆದಾಡಿದಂತೆ.
ಮೋಡದ ತುಣುಕುಗಳೇ ಅರಳಿ ಆಗಸಕ್ಕೆ ಸೇರುವಂತೆ
ಬೂರುಗ ಮರದ ಕಾಯಿಗಳಿಂದ ಅರಳುತ್ತಿದೆ ಅರಳೆ.
ನೆಲಕ್ಕೆ ಬಿದ್ದ ಕಾಯನ್ನು ಎತ್ತಿಕೊಳ್ಳುತ್ತೇನೆ,
ಅರಳೆಯನ್ನೆಳೆದು ಆಗಸಕ್ಕೆ ಹಾರಿಸುತ್ತೇನೆ,
ಅದು ಹಾರುತ್ತ ಸಾಗಿ ಮೋಡವನ್ನು ಸೇರಿಕೊಳ್ಳುತ್ತದೆ.
ಅವಳ ಕೈಗೆ ಅರಳೆಯನ್ನಿಟ್ಟರೆ ಎಷ್ಟು ಸಂಭ್ರಮಿಸುತ್ತಾಳೆ,
ಆಗಸವನ್ನೆಲ್ಲ ಬಿಳಿಮೋಡದಿಂದ ತುಂಬಿಸುತ್ತಾಳೆ,
ಕಲ್ಪಿಸಿಕೊಳ್ಳುತ್ತ ಪುಲಕಗೊಳ್ಳುತ್ತೇನೆ.

6 comments

Leave a Reply

Your email address will not be published. Required fields are marked *