ನಿನ್ನ ಹೆಸರು ನನ್ನ ಹೃದಯದಲ್ಲಿ ಮೊಳಗುತ್ತ
ನಿನ್ನ ಮಾತಿನ ನೆನಪುಗಳು ನನ್ನ ಕಿವಿಗಳಲ್ಲಿ ಕೇಳುತ್ತ
ನಾಟ್ಯವಾಡುವ ನಿನ್ನ ಪದಾಘಾತಗಳು ನನ್ನೊಳಗೆ ಅಚ್ಚುಮೂಡಿಸುತ್ತ
ನನ್ನ ಕಂಬನಿಗಳ ತುಂಬ ನಿನ್ನ ನೋಡುವ ಹಂಬಲವಿರುತ್ತ
ನನ್ನ ಉಸಿರ ತುಂಬ ನೀನು ತುಂಬುತ್ತ
ನಾನು ನೀನೇ ಆಗುವವರೆಗೂ
ನೀನು ನನಗೆ ಕಾಣುವುದಿಲ್ಲವೇನು?
“ನೀನೇ ಸತ್ಯವಾಗದೇ ನಿನಗೆ ಸತ್ಯ ಕಾಣುವುದಿಲ್ಲ”
ಪ್ರೇಮಿಯೇ ಆಗದೇ ಪ್ರೇಮಿಸುವವಳು ಬರುವುದಿಲ್ಲ?
-೨-
ಮಾಗಿ ಕಾಲವೇಕೋ ಆಹ್ಲಾದಕರವೆನಿಸುತ್ತದೆ.
ಬೆಟ್ಟದಾಚೆಯಿಂದ ಬೀಸಿ ಬರುತ್ತದೆ ಬಿರುಸಾದ ಗಾಳಿ
ಒಣಗಿದೆಲೆಗಳ ಗಂಧ, ಉದುರಿ ತೇಲುವ ಸದ್ದು,
ಮಂದವಾಗುತ್ತದೆ ಮಧ್ಯಾಹ್ನದ ಬಿಸಿಲು.
ಸುತ್ತ ತೇಲುವ ಬಣ್ಣಗೆಟ್ಟ ಎಲೆಗಳ ಪರಿವಿಲ್ಲದೇ
ತಮ್ಮಷ್ಟಕ್ಕೇ ಮೇಯುತ್ತಿರುತ್ತವೆ ದನಗಳು;
ಕಟ್ಟಿಗೆ ಕಡಿಯುವವ ಕಟ್ಟಿಗೆ ಕಡಿಯುತ್ತಿರುತ್ತಾನೆ
ದನ ಕಾಯುವವನು ದನ ಕಾಯುತ್ತಿರುತ್ತಾನೆ;
ನಾನು ಮಾತ್ರ ಎಲ್ಲರ ನಡುವಿದ್ದೂ ಇಲ್ಲದಂತಿರುತ್ತೇನೆ.
ಪ್ರತೀ ಮಾಗಿಯಲ್ಲೂ ನಾನು ಇದೇ ಪ್ರಶ್ನೆಯನ್ನು ಕೇಳಿಕೊಳ್ಳುತ್ತಿದ್ದೆ:
ಓ ದೇವರೇ, ನಾನು ಯಾವ ಲೋಕದವನು?
(ಯಾವ ಪ್ರಶ್ನೆ ಕಣ್ಣೀರಿನೊಡನೆ ಬರುವುದಿಲ್ಲವೋ ಅದಕ್ಕೆ ಬೆಲೆಯಿಲ್ಲ)
ಪ್ರಶ್ನೆ ಉತ್ತರವಾಗಲು ಕಾಲ ಬರಬೇಕು ಅನ್ನುತ್ತಾರೆ; ಅದು ಸುಳ್ಳು.
ಕಾಲದ ಸ್ವರೂಪವೇ ಬೆಳಕಿನದು; ಅದನ್ನು ಅಳೆಯಬರುವುದಿಲ್ಲ.
-೩-
ಹುಡುಕುವುದೆಂದರೆ ಸೋಲುವುದು; ಮತ್ತು ಸೋಲುವುದೇ ಸುಂದರ.
ಸೋಲುವುದೆಂದರೆ ಹೃದಯದಲ್ಲಿಟ್ಟುಕೊಳ್ಳುವುದು.
ಬೆಳಕಿಗೆ ಸೋತು ಬದಲಾಗುತ್ತಾಳೆ ಪ್ರಕೃತಿ; ಬೆಳಕು ಬದಲಾಗುವುದಿಲ್ಲ!
ಕತ್ತಲಲ್ಲಿರದವನು ಬೆಳಕಿನಲ್ಲೂ ಇರಲು ಸಾಧ್ಯವಿಲ್ಲ.
ರೂಪಾರೂಪಗಳೆಲ್ಲವೂ ಒಂದೇ.
ನದಿಯಲ್ಲಿ ಕಳೆದ ನಿನ್ನ ಕಾಲ್ಗೆಜ್ಜೆಗಳು ಜಲಪಾತದಿಂದ ದುಮುಕಿ
ಸೂರ್ಯರಶ್ಮಿಗೆ ಸೋತು ಆಗಸಕ್ಕೆ ಸಾಗಿ, ಮೋಡವಾಗಿ
ಮತ್ತೆ ಮುಂಜಾನೆಯೇ ತುಂತುರುಮಳೆ!
ಎಲ್ಲೆಲ್ಲೂ ನೀನಿರುವೆ ಒಲವೇ,
ಒಮ್ಮೊಮ್ಮೆ ನಾನೇ ಅದನ್ನರಿಯಲು ಸೋಲುತ್ತೇನೆ;
ವಿರಹರೂಪಿಯಾಗುತ್ತೇನೆ.
ನನಗೇಕೋ ಸಂತಸ ಸಿಗುತ್ತಿಲ್ಲ; ಅದೂ ಸಂತಸದ ಸಂಗತಿಯೇ!
-೪-
ವಿರಕ್ತಿಯೊಂದೇ ಮಾರ್ಗವೆನ್ನುತ್ತಾರೆ
ಅನುರಕ್ತಿಯಲ್ಲಿ ಇನ್ನೂ ಪ್ರೀತಿಕರ ಮಾರ್ಗ ಕಾಣುತ್ತದೆ ನನಗೆ.
ಕುತೂಹಲ ಕೇವಲರಿಗೆ ದೊರೆಯುವುದಿಲ್ಲ;
ಒಡ್ಡಿಕೊಳ್ಳುತ್ತೀಯ ಹೇಳು ನಿನ್ನನ್ನೇ ಪಣಕ್ಕೆ.
ಸಿದ್ಧವಾಗುತ್ತೀಯ ಹೇಳು ಸೋಲಿಗೆ, ಸಾವಿಗೆ?
ಇಲ್ಲದಿದ್ದರೆ ಬರಬೇಡ ನನ್ನ ಬಳಿಗೆ.
ಕಾಲದ ಸ್ವರೂಪವೇ ಕತ್ತಲೆಯದು.
ಬೆಳಕು ಬರುತ್ತ ಬರುತ್ತ ಅದು ಅನಂತದಲ್ಲಿ ಕರಗತೊಡಗುತ್ತದೆ.
ಏಕೆಂದರೆ ರಾಹಿತ್ಯವೇ ಕತ್ತಲೆ; ರಾಹಿತ್ಯವೇ ಕಾಲ.
ನಾವು ಇನ್ನೂ ಎಷ್ಟು ಕಾಲ
ನದಿ ದಡದಲ್ಲಿ ಹೊಳೆಯುವ ಕಲ್ಲುಗಳನ್ನು ಆರಿಸುತ್ತಿರಬೇಕು?
-೫-
ನೀನು ಬರುತ್ತೀಯೆಂದೇ ನಾನು ನದಿ ದಡದಲ್ಲಿ ಕಾಯುತ್ತಿರುತ್ತೇನೆ.
ಏನು ಮಾಡುವುದು ನೀನು ಬರದೇ ಇದ್ದರೆ?
ನನ್ನ ಅಸ್ಥಿತ್ವದ ತುಂಬ ನೀನೇ ತುಂಬಿ, ನೀನಿಲ್ಲದೇ ಮತ್ತೇನಿದೆ.
ಆದರೂ, ನೀನಿಲ್ಲದಿರುವಾಗಲೂ ನನಗೊಂದು ದಾರಿಯಿದೆ,
ನೀನಿಲ್ಲದಾಗ ಒಂದೇ ಒಂದು ದಾರಿಯಿದೆ.
ನನ್ನ ಹೃದಯದ ತುಂಬ ಒಂದೇ ಪ್ರಶ್ನೆ.
ನಾನು ಯಾರು, ನೀನು ಯಾರು, ದೇವರೇ ನೀನೆಲ್ಲಿರುವೆ,
ಅವಳು ಎಲ್ಲಿದ್ದಾಳೆ, ಅವಳ ಹೃದಯದಲ್ಲಿ ಏನಿದೆ…
ಇದೆಲ್ಲವೂ ಒಂದೇ ಪ್ರಶ್ನೆಯ ರೂಪಗಳು.
ಬಿಸಿಲು ನೆರಳುಗಳ ಚಿಂತೆಯಿಲ್ಲ ನನಗೆ; ಗುರುವು ದೊರೆತಾಯಿತು..