ಆಸೆಯನ್ನೂ ನಿರಾಸೆಯನ್ನೂ ಮೀರಿದ ಒಲವಾಗಿ…

 

ಆತನ ಹೆಸರು ಸರಿಯಾಗಿ ನೆನಪಿಗೆ ಬರುತ್ತಿಲ್ಲ, ಹುಸೇನ್ ಅಂತ ಇರಬೇಕೇನೊ. ಅದು ನಾನು ಮೂರನೇ ತರಗತಿ ಓದುತ್ತಿದ್ದ ಸಮಯವೆನ್ನಿಸುತ್ತದೆ. ಆತನ ಬಳಿ ಒಂದು ಕಣ್ಣಿನಾಕಾರದ ಗಾಜಿನ ವಸ್ತುವಿತ್ತು. ಒಂದು ಕಡೆ ಚಪ್ಪಟೆಯಾಗಿ ಒಂದೇ ಸಮತಲವಿದ್ದು ಮತ್ತೊಂದು ಕಡೆ ವಿವಿಧ ದಿಕ್ಕುಗಳಿಗೆ ಸಮತಲ ಮುಖಗಳಿದ್ದ ವಜ್ರದಂತಹ ವಸ್ತು ಅದು. ಅದು ತನ್ನ ತಾಯಿಯ ಸರದ ಪದಕವೆಂದು ಆತ ಹೇಳಿದ್ದ. ಅದನ್ನು ಕಣ್ಣಿಗೆ ಹಿಡಿದುಕೊಂಡು ನೋಡಿದರೆ ಎದುರಿಗಿದ್ದ ಒಬ್ಬ ವ್ಯಕ್ತಿ ಭಿನ್ನ ಭಿನ್ನ ಬಣ್ಣಗಳ ಅನೇಕವಾಗಿ ತೋರಿಬರುತ್ತಿದ್ದ. ಕಿಟಕಿಯನ್ನೇ ನೋಡಿದರೆ ಬಣ್ಣಗಳಿಂದ ತುಂಬಿದ ಅನೇಕ ಬಣ್ಣಗಳ ಅನೇಕವಾಗಿ ತೋರಿಬರುತ್ತಿದ್ದವು.


ನನಗೆ ಅದು ತುಂಬ ಇಷ್ಟವಾದುದಾಗಿತ್ತು, ಆತನಲ್ಲಿ ನನಗೆ ಅದನ್ನು ಕೊಡಲು ಕೇಳಿಕೊಂಡಿದ್ದೆ. ಮೊದಲೆರೆಡು ದಿನಗಳು ಆತ ಅದನ್ನು ಕೊಡಲು ಒಪ್ಪಿಕೊಂಡಿರಲೇ ಇಲ್ಲ. ಮೂರನೆಯ ದಿನ, ಎಂಟಾಣೆ ಕೊಟ್ಟರೆ ಕೊಡುತ್ತೇನೆ ಅಂದ. ಸರಿ, ಎಂದು ಅವನಿಗೆ ಎಂಟಾಣೆ ಕೊಟ್ಟು ಅದನ್ನು ತೆಗೆದುಕೊಂಡಿದ್ದೆ. ಆನಂತರದಲ್ಲಿ ಅದು ಸುಮಾರು ದಿನಗಳವರೆಗೆ ನನ್ನ ಬಳಿಯೇ ಇತ್ತು. ಹಕ್ಕಿಗಳನ್ನು ನೋಡಲು ಪ್ರಯತ್ನಿಸುವುದು, ಅದನ್ನು ಕಣ್ಣ ಮುಂದಿಟ್ಟುಕೊಂಡು ಚಿಟ್ಟೆಗಳ ಹಿಂದೆ ಓಡುವುದು, ಪಪ್ಪಾಯಿ ಹಣ್ಣುಗಳನ್ನು, ಬಾಳೆ ಗಿಡವನ್ನು, ಮಂಜಿನ ಹನಿಯನ್ನು, ಮನೆಯವರನ್ನು ನೋಡುವುದೇ ಸಂಭ್ರಮವಾಗಿತ್ತು. ಮತ್ತು ಅದು ಯಾವಾಗಲೂ ನನ್ನ ಬಳಿಯೇ ಇರುತ್ತಿತ್ತು.

ನಮ್ಮ ಊರಿನ ದೇವಸ್ಥಾನದ ಮೆಟ್ಟಿಲುಗಳ ಕೆಳಗೆ ತೊಟ್ಟಿಲ ಬಾವಿಯಿದೆ, ಮತ್ತು ಪಕ್ಕದಲ್ಲಿಯೇ ಬೆಟ್ಟದಿಂದ ಹರಿವ ನೀರು ಸಣ್ಣ ಕಾಲುವೆಯಾಗಿ ಹರಿದು ಹೋಗುತ್ತದೆ. ಒಂದು ದಿನ ಬಟ್ಟೆ ತೊಳೆಯಲು ಹೊರಟ ಅಮ್ಮನೊಡನೆ ಹೋದವನು ಆ ಜುಳುಜುಳು ನೀರಿನಲ್ಲಿ ಆಟವಾಡುತ್ತ, ಆ ಮೂರನೆಯ ಕಣ್ಣನ್ನು ಕಳೆದುಕೊಂಡುಬಿಟ್ಟೆ. ಅದಕ್ಕಾಗಿ ಆ ಸ್ಥಳದಲ್ಲಿ ಅನೇಕ ಬಾರಿ ಹೋಗಿ ಹುಡುಕಿದ್ದೇನೆ. ಸುಮಾರು ಹದಿನೇಳು ವರ್ಷಗಳಾಗಿರಬೇಕು ಈಗ, ಈಗಲೂ ಆ ತೊರೆಯ ಬಳಿ ಹೋದರೆ, ಸುಮ್ಮನೇ ಅಲ್ಲಿ ಹುಡುಕುತ್ತೇನೆ.

ಹುಸೇನನೂ ನಾಲ್ಕನೆಯ ತರಗತಿ ನಂತರ ಸಿಗಲೇ ಇಲ್ಲ. ಆತ ಒಂದು ಹಾಡು ಹೇಳುತ್ತಿದ್ದ: “ಜಾವೋ ತುಮ್ ಚಾಹೇ ಜಹಾ, ಯಾದ್ ಕರೋಗೆ ವಹಾ”. ಆ ಹಾಡು ಯಾಕೋ ನೆನಪಿದೆ. ಅನೇಕ ವರ್ಷಗಳ ನಂತರ ಹುಸೇನ್‌ನ ತಂದೆಯನ್ನು ಆತನ ಕುರಿತು ಕೇಳಿದ್ದು ನೆನಪಿದೆ. ಅವನು ದುಬೈಗೆ ಹೋಗಿದ್ದಾನೆ ಎಂದು ಹೇಳಿದ್ದರು.

ನಾನು ಬಾಲ್ಯದಲ್ಲಿ ಕಳೆದುಕೊಂಡ ಅತ್ಯಮೂಲ್ಯ ವಸ್ತು ಅದು ಅನ್ನಿಸುತ್ತದೆ. ಯಾಕೋ ಮನಸು ಮತ್ತೆ ಅದರ ಕಡೆಗೆ ಸೆಳೆಯುತ್ತದೆ. ಆ ನಂತರದಲ್ಲಿ ಅನೇಕ ಸ್ಟೇಶನರಿ ಅಂಗಡಿಗಳಲ್ಲಿ ಅಂತಹ ಪದಕವಿರುವ ಸರಕ್ಕಾಗಿ ಹುಡುಕಾಡಿದ್ದೇನೆ, ಮತ್ತೆ ಮತ್ತೆ. ಒಮ್ಮೊಮ್ಮೆ ಸುಮ್ಮನೇ ಕುಳಿತಾಗ ಅದರ ನೆನಪು ಮಾಡಿಕೊಳ್ಳುತ್ತೇನೆ. ಅದು ಅಲ್ಲಿಯೇ ಎಲ್ಲೋ ಇರಬೇಕು, ಆ ಕಲ್ಲುಗಳ ಅಥವಾ ಮಣ್ಣಿನಲ್ಲಿ ಹುದುಗಿಹೋಗಿರಬೇಕು ಅಥವಾ ಆ ನೀರಿನಲ್ಲಿ ಸೇರಿ ಯಾವುದೋ ಗದ್ದೆಯ ಕಡೆಗೆ ಹೋಗಿರಬೇಕು. ಎಲ್ಲೋ ಇದೆ ಅದು ಅನ್ನುವ ಭಾವ. ಎಲ್ಲೋ ಇದ್ದರೆ ಜೊತೆಯಲ್ಲಿಯೇ ಇದ್ದಂತೆಯೂ ಅಲ್ಲವೇ? ಅದು ಅಸ್ತಿತ್ವದಿಂದ ಮರೆಯಾಗಲು ಸಾಧ್ಯವೇ ಇಲ್ಲ. ತೀರಿಕೊಂಡ ಆತ್ಮೀಯರ ದೇಹ ಬೂದಿಯಾಗಿ ಗಿಡದಲ್ಲಿ ಸೇರಿ, ಗಾಳಿಯಾಗಿ ಬಯಲಲ್ಲಿ ಅಲೆದು, ಆತ್ಮ ವಿಶ್ವಚೈತನ್ಯವನ್ನು ಸೇರಿ ಎಲ್ಲಿ ಹೋದರೂ ಅಸ್ತಿತ್ವದಲ್ಲಿಯೇ ಇರುವಂತೆ. ದೂರ ಅನ್ನುವ ಭಾವವೇ ಇಲ್ಲವಾಗಿ, ಎಲ್ಲಿಯೋ ಇದೆ ಅನ್ನುವ ಭಾವ.

ಕಳೆದುಹೋದ ವಸ್ತುವೊಂದು ಎಷ್ಟೆಲ್ಲ ಅಮೂಲ್ಯವೆನ್ನಿಸುತ್ತದೆ. ಕಳೆದುಹೋಗುವ ಮೂಲಕ ಅದು ಬಳಿಯಲ್ಲಿಲ್ಲವೆನ್ನಿಸುತ್ತದೆ. ಈಗೀಗ ಅನ್ನಿಸುತ್ತಿದೆ, ಅದು ಕಳೆದು+ಇದೆ; ನನ್ನಲ್ಲಿಯೇ ಇದೆ; ಸ್ಪೂರ್ತಿಯಾಗುವಂತೆ ಒಂದೇ ಒಂದು ಬಾರಿ ಎದುರಾಗಿ ಕಣ್ತುಂಬ ಬೆಳಕು ತುಂಬಿಕೊಂಡು ಮುಗುಳ್ನಕ್ಕು ಮುಂದೆ ಹೋದ ಹುಡುಗಿಯಂತೆ. ಆಸೆಯನ್ನೂ ನಿರಾಸೆಯನ್ನೂ ಮೀರಿದ ಒಲವಾಗಿ…

8 comments:

ಚಿತ್ರಾ ಕರ್ಕೇರಾ ದೋಳ್ಪಾಡಿ.. October 7, 2008 1:06 AM
“ದೂರ ಅನ್ನುವ ಭಾವವೇ ಇಲ್ಲವಾಗಿ, ಎಲ್ಲಿಯೋ ಇದೆ ಅನ್ನುವ ಭಾವ..”
ನವಿರು ನಿರೂಪಣೆ.ಮನಸ್ಪರ್ಶಿ..
-ಚಿತ್ರಾ
Raghavendra October 7, 2008 10:33 PM
ಧನ್ಯವಾದ ಚಿತ್ರಾ ಅವರೇ…
ಶಾಂತಲಾ ಭಂಡಿ October 9, 2008 5:28 PM
ರಾಘವೇಂದ್ರ ಅವರೇ…
ನಿರೂಪಣೆ ಇಷ್ಟವಾಯ್ತು.
ಹೀಗೆಯೇ ಅಮೂಲ್ಯವಾದುದೆಲ್ಲ ಕಳೆದುಹೋಗುವುದು ಬಾಲ್ಯದಲ್ಲೇ. ಆದ್ದರಿಂದಲೇ ಬಾಲ್ಯ ಅಮೂಲ್ಯವೆನಿಸುತ್ತದೆ.
ಅಲ್ಲವೇ?
ಚಂದದ ಬರಹ. ತುಂಬ ಇಷ್ಟವಾಯ್ತು.
ನಾಗಮಣಿ ಎಸ್. ಪಿ October 10, 2008 12:59 AM
chennagide………..aadre….kalkondirodakke tumbaa bejaaraaytu…..aadida maatu…odedha muttu matte sigadu antare…..hogirodu hoytu, sigade iddaaga, “doora annuva bhava illa” annodu niraseyinda banda maate taane….
aase padode tappu anta yake annisodilla…..elliddaroo adu nannade anno bhaavave chennagide allave……
Raghavendra October 10, 2008 1:06 AM
ಧನ್ಯವಾದ ಶಾಂತಲಾ ಅವರೇ, ಬಾಲ್ಯದ ಬಯಕೆಯೂ ಅಷ್ಟೇ ಪರಿಶುದ್ಧವಾಗಿರುತ್ತದೆ ಅಲ್ಲ? ಯಾವುದೇ ಲೆಕ್ಕಾಚಾರವಿಲ್ಲದೇ..

ನಾಗಮಣಿಯವರೇ,
ನಿರಾಸೆಯೇ ಆಗಿದ್ದರೆ “ದೂರ ಅನ್ನುವ ಭಾವವೇ ಇಲ್ಲ” ಅನ್ನುವ ಮಾತನ್ನು ಬರೆಯುತ್ತಲೇ ಇರಲಿಲ್ಲ. ಅಷ್ಟು ಪ್ರಾಮಾಣಿಕನಿದ್ದೇನೆ ನಾನು. (ನಗುತ್ತೀರಾ?)
ಆ “ದೂರ ಎನ್ನುವ ಭಾವವೇ ಇಲ್ಲ” ಅನ್ನುವ ಭಾವ ಬರುವುದಕ್ಕೂ ಮೊದಲು ಎಷ್ಟೋ ವರ್ಷಗಳವರೆಗೆ ಕಳೆದುಕೊಂಡ ಭಾವವನ್ನು ಅನುಭವಿಸುತ್ತೇವೆ ಅನ್ನುವುದೂ ನಿಜ. ಅಲ್ಲಿಂದ ಇಲ್ಲಿಗೆ ಬರುವ ದಾರಿ ತುಂಬ ಸಹಜವಾದುದು….

ನಾಗಮಣಿ ಎಸ್. ಪಿ October 10, 2008 1:53 AM
illa…nagodilla…
nanu helabayasiddu, beku anta innobbarallirodannu padeda sandarbha….
innobbarallirodannu, nodi anandisalaaradeke manassu? tanage beku anta ase padodralli, adannu svaadheena padisikollodarallide manassina ondu mukha…….
sunaath October 25, 2008 12:25 AM
ರಾಘವೇಂದ್ರರೆ,
ಭಾವಪೂರ್ಣವಾದ ಬರಹ. ಮನಸ್ಸನ್ನು ತಟ್ಟುತ್ತದೆ.
ಬಾನಾಡಿ December 17, 2008 10:01 AM
ಕೆಲವೊಮ್ಮೆ ಅಪರಿಚಿತ ಹುಡುಗಿಯರು ನಮ್ಮನ್ನು ಕಂಡು ಅಷ್ಟೊಂದು ಪ್ರೀತಿಯ ನಗುವನ್ನು ನಮ್ಮೆಡೆ ಚೆಲ್ಲಿ ಎಲ್ಲಿ ಮಾಯವಾಗ್ತಾರೋ… ಅವರನ್ನು ಹುಡುಕುತ್ತಾ ಅವರ ನೆರಳನ್ನು ಹಿಡಿಯುತ್ತೇವೆ.
ಕೆಲವೊಮ್ಮೆ ಪರಿಚಿತ ಹುಡುಗರು ನಮ್ಮನ್ನು ಕಂಡು ಕಾಣದವರಂತೆ ಹೋಗ್ತಾರೆ … ಅವರನ್ನು ಹುಡುಕುವುದೇ ಬೇಡ ಅಂತನಿಸುತ್ತದೆ.
ಮತ್ತೆ ನಿಮ್ಮ ಅನಿಸಿಕೆಗಳಂತಹವು …
ಒಳೆಯ ಬರಹ
ಅಭಿನಂದನೆಗಳು
ಬಾನಾಡಿ

Leave a Reply

Your email address will not be published. Required fields are marked *