ಎಷ್ಟು ಹೊತ್ತು ಕುಳಿತಿರಲಿ, ಇನ್ನು ನನ್ನ ಗಾಳಕ್ಕೆ ಬೀಳುವುದೇ ಇಲ್ಲ ಮೀನು ಅನ್ನಿಸಿದ ಮೇಲೂ? ಏನನ್ನು ಬರೆಯುವುದು, ಯಾವ ಸಾಲುಗಳೂ ಬಳಿ ಬರುವುದಿಲ್ಲ ಅನ್ನಿಸುವಾಗಲೂ? ಕಡಲ ಕಿನ್ನರಿಯರೇ ಹೊತ್ತು ತರುವುದಿಲ್ಲವೇನು, ಸ್ಪೂರ್ತಿಯ ಅಮೃತಕುಂಭವನ್ನು? ಮುಂಜಾನೆಯೇ ನನ್ನ ನಿನ್ನ ನಡುವೆ ಈ ಗಾಢ ಗಂಭೀರ ಮೌನವೊಂದು ಎಳೆಬಿಸಿಲಂತೆ ಹರಡಿದೆ, ಎಲೆಯೊಂದು ಕಳಚಿ ಬೀಳುತ್ತ ಒಂದು ಮಾತಿನ ಸೇತುವೆ ಕಟ್ಟಲು ಪ್ರಯತ್ನಿಸಿದೆ. ಆದರೇನು, ಹಾರಿ ಹೋಗಿವೆ ಸಾಲು ಹಕ್ಕಿಗಳು, ಹೊತ್ತು ತರುವವರಿಲ್ಲ ಮಾತಿನ ಹೂವರಳುಗಳನ್ನ. ಬಂದುಬಿಡೇ ದಿವದ ದೀಪಾವಳಿಯಂತ ಮಳೆಬಿಲ್ಲೆ, ಕಾದಿವೆ ತುಂತುರು ಹನಿಗಳು ಎಳೆಬಿಸಿಲ ಮಡಿಲಲ್ಲಿ ಕುಳಿತು…
ನನಗೀ ನಿರಾಳ ಬೆಳಕಿನ ನಿರ್ಮೋಹಿ ಕಿರಣಗಳ ನಿರ್ಮಮ ಭಾವದಲ್ಲಿ ಮಿಂದು ಪ್ರೇಮದಾಸೆ ಹುಟ್ಟಿದೆ.
ಅದೋ ಒಂದು ಕ್ಷಣದಲ್ಲಿ ಮಿಂಚಂತೆ ಕಂಡು ಮರೆಯಾದವು, ಮುಂದಿಟ್ಟಂತೆ ಮಾಡಿ ಹಿಂದಿಟ್ಟು ಮರೆಯಾದ ಹೆಜ್ಜೆಗಳು. ಕಣ್ಣುಬಿಡಲಿಲ್ಲವೇ ನಿದ್ದೆ ತಿಳಿದೆದ್ದ ಹಕ್ಕಿ? ಹುಲಿಮೇಲೆ ಕುಳಿತು ಹೊರಡುತ್ತಾಳೆ, ಕೊಳಲೂದುತ್ತಾನೆ; ಬಯಲ ತುಂಬ ಆಗಷ್ಟೇ ಜನಿಸಿದಂತೆ ಹೊಳೆಯುತ್ತಿದೆ ಹಸಿರು ಹುಲ್ಲು. ಹೆಸರಿಡುವುದಕ್ಕೊಂದು ಮಹೂರ್ತವಿದೆ, ಅಲ್ಲಿಯವರೆಗೂ ಕಾಯಬೇಕು….